ಅಹಿಂಸಾ ತತ್ವ ಹಾಗು ಅನಾಫಿಲಿಸ್

ಬೌಧಃ ಸನ್ಯಾಸಿಗಳು ನೆಲದ ಮೇಲೆ ನಡೆಯುವಾಗ ಕಾಲಿನಡಿಗೆ ಬಿದ್ದು ಇರುವೆ ಸಾಯಬಾರದು ಎಂದು ಎಚ್ಚರವಹಿಸುವಷ್ಟು ಅಹಿಂಸೆಯನ್ನು ಮೈಗೂಡಿಸಿಕೊಂಡಿದ್ದರಂತೆ. ಅಷ್ಟಿರುವಾಗ ನಾವು ಸಾಮಾನ್ಯ ಮಾನವರು ಏನಿಲ್ಲ ಅಂದರೂ ನಮ್ಮ ಅರಿವಿಗೆ ಬರುವಂತಹ ಹಿಂಸೆಗಳನ್ನು ಮಾಡದಂತೆ ಎಚ್ಚರವಹಿಸಬಹುದಲ್ವೆ? ಇಂತಹ ಯೋಚನೆ ಬಂದದ್ದೆ ತಡ, ಆ ದಿನದಿಂದಲೇ ಅಹಿಂಹಾ ತತ್ವ ಮೈಗೂಡಿಸಿಕೊಂಡಿದ್ದೆ.
ಅಹಿಂಸಾ ತತ್ವದ ಮೊದಲ ಹಂತವಾಗಿ ಮಾಂಸಾಹಾರ ಬಿಟ್ಟೆ. ಇದೆಲ್ಲಾ ತುಂಬಾ ಸುಲಭ ಅನ್ನಿಸಿತ್ತು. ಆದರೆ ನಿಜವಾದ ತೊಂದರೆ ಪ್ರಾರಂಭವಾದದ್ದು ರಾತ್ರಿ ಮಲಗುವ ವಿಷಯದಲ್ಲಿ. ಬೆಂಗಳೂರಿನ ಬಾಡಿಗೆಯ ಮನೆಯಲ್ಲಿ ವಾಸಮಾಡುವ ನನಗೆ ಮೊದಲ ಶತ್ರು ಸೊಳ್ಳೆಗಳ ಸೈನ್ಯ. ಮನೆಯಲ್ಲಿ ಸರಿಯಾಗಿ ಹುಡುಕಿದರೂ ಒಂದು ಚೂರು ಬ್ರೆಡ್ ಸಿಗದಿದ್ದರೂ, ಪ್ರತಿಯೊಂದು ಜಾಗದಲ್ಲಿ ಸೊಳ್ಳೆ ಬತ್ತಿ ಸಿಗುತ್ತದೆ. ಅಂತಹ ಸಿಸ್ಟಮ್ಯಾಟಿಕ್ ಪ್ರತಿ ಆಕ್ರಮಣ ಸೊಳ್ಳೆ ಸೈನ್ಯದ ಮೇಲೆ ಮಾಡುತಿದ್ದ ನನಗೆ, ನನ್ನ ಅಹಿಂಹಾ ತತ್ವ ಸ್ವಲ್ಪ ಕಷ್ಟ ಅನ್ನಿಸಿತು. ಆದರೂ ಮನಸ್ಸಿದ್ದರೆ ಮಾರ್ಗ ಇದೆ ಎಂದು ನಂಬಿದ್ದ ನಾನು ಮನೆಯಲ್ಲಿದ್ದ ಎಲ್ಲಾ ಸೊಳ್ಳೆ ಬತ್ತಿಗಳನ್ನು ಮೋರಿಗೆಸೆದು ಸೊಳ್ಳೆ ಸೈನ್ಯದ ಜೊತೆ ರಾಜಿ ಪಂಚಾತಿಕೆ ಮಾಡುವ ನಿರ್ಧಾರ ಮಾಡಿದೆ.
ಡಿಸ್ಕವರಿ ಚಾನೆಲ್ ನಲ್ಲಿ ಹುಲಿ ಜಿಂಕೆಯನ್ನು ಅಟ್ಟಿಸಿ ತಿನ್ನುವುದನ್ನು ಮರುಕದಿಂದ ನೋಡುವ ನಾವು, ಹುಲಿ ಪಾಪ ಹೊಟ್ಟೆಪಾಡಿಗೆ ಬೇಟೆಯಾಡುತ್ತದೆ ಎಂದು ಸಮಾಧಾನಪಟ್ಟುಕೊಳ್ಳುತ್ತೇವೆ. ಅದೇ ಸೊಳ್ಳೆಗಳೂ ಕೇವಲ ಹೊಟ್ಟೆಪಾಡಿಗೆ ತಾನೆ ಮನುಷ್ಯನ ರಕ್ತ ಹೀರುತ್ತದೆ. ಯಾವುದಾದರು ಸೊಳ್ಳೆ ಮನುಷ್ಯನ ರಕ್ತ ಮಾರಿ ಕಿವಿಗೆ ಓಲೆನೋ, ಕಾಲಿಗೆ ಗೆಜ್ಜೆ ಕಟ್ಟಿರುವ ಉದಾಹರಣೆ ನೋಡಿದ್ದೀರ? ಇದರ ಅರ್ಥ ಸೊಳ್ಳೆಗಳೂ ಮಾಡುವುದು ತಪ್ಪಲ್ಲ. ಸೊಳ್ಳೆಗಳಿಗೂ ಬದುಕುವ ಹಕ್ಕಿದೆ. ಹಸಿವನ್ನು ತಣಿಸಲು ಮಾಡುವ ಬೇಟೆ ತಪ್ಪಲ್ಲ. ಒಂದು ವೇಳೆ ಸೊಳ್ಳೆಗಳು ಪಿಜ್ಜಾ, ಬರ್ಗರ್ ಅಥವಾ ಮಸಾಲೆ ದೋಸೆ ತಿನ್ನುವಂತಿದ್ದರೆ ರಕ್ತ ಹೀರುವ ಹೀನ ಕೃತ್ಯ ಮಾಡುತ್ತಿರಲಿಲ್ಲ.
ಈಗ ನನ್ನ ಮನಸ್ಸಿನಲ್ಲಿ ಸೊಳ್ಳೆಗಳ ಬಗ್ಗೆ ಸಂಪೂರ್ಣ ಪೊಸಿಟಿವ್ ಇಮೇಜ್ ಬೆಳೆಯಿತು. ಇನ್ನು ತಡಮಾಡಬಾರದು, ಸೊಳ್ಳೆಗಳ ಬಗ್ಗೆ ಜನರಲ್ಲಿ ಮಧುರಭಾಂದವ್ಯ ಬೆಳೆಸಬೇಕು. ಸೊಳ್ಳೆಗಳನ್ನು ಕೊಲ್ಲುವುದು ಅಪರಾಧ ಅನ್ನುವುದು ಜನರಲ್ಲಿ ಜಾಗ್ರತಿ ಮೂಡಿಸಬೇಕು. ಹೇಗೆ ಎಂದು ತಲೆಕೆರೆಯುತ್ತಿದ್ದ ನನಗೆ ಒಂದು ಯೋಚನೆ ಹೊಳೆಯಿತು.
ಜನರು ಪ್ರೇಮಿಗಳ ಬಗ್ಗೆ ಮಧುರ ಭಾವನೆಹೊಂದಿದ್ದಾರೆ, ಅದಕ್ಕೆ ನೂರಾರು ಪ್ರೇಮಕತೆಯ ಚಿತ್ರಗಳು ಸಕ್ಸೆಸ್ ಅಗಿದ್ದು. ಸೊಳ್ಳೆಗಳೂ ಅಮರ ಪ್ರೇಮಿಗಳೆಂದು ಜನರಲ್ಲಿ ಭಾವನೆ ಹುಟ್ಟಿಸಿದರೆ ಹೇಗೆ? ಯೋಚನೆ ಬಂದದ್ದೇ ತಡ, ಒಂದು ಸಣ್ಣ ಕಾವ್ಯ ಬರೆದೇ ಬಿಟ್ಟೆ.
ಸೊಳ್ಳೆಗಳೂ ಬರೆಯುತ್ತಾವೆಯೆನೋ
ರಕ್ತದಿಂದ ಪ್ರೇಮಪತ್ರ,
ಅದಕ್ಕೇ,
ಕದಿಯುತ್ತಿವೆ.....
ಮನುಷ್ಯನ ರಕ್ತ..!!!!!
ನನ್ನ ಮೊದಲ ಹನಿಗವನವನ್ನು ಸೊಳ್ಳೆಗಳಿಗೆ ಅರ್ಪಿಸಿ, ಪತ್ರಿಕೆಯ ಸಂಪಾದಕರಿಗೆ ಪೋಸ್ಟ್ ಮಾಡಿದೆ. ನನ್ನ ಹನಿಗವನ ಪತ್ರಿಕೆಯಲ್ಲಿ ಪ್ರಕಟವಾಗಿ ಅದರಿಂದ ಜನರಲ್ಲಿ ಸೊಳ್ಳೆಗಳ ಬಗ್ಗೆ ಕರುಣೆ ಹುಟ್ಟಿ, ಸೊಳ್ಳೆಗಳ ಮದರ್ ತೆರೆಸಾ ಎಂಬ ಬಿರಿದು, ನೋಬೆಲ್ ಪ್ರಶಸ್ತಿಯ ಕನಸು ಕಾಣುತ್ತಾ ಮಲಗಿದೆ.
ಏಕೋ ಇಂದು ಸೊಳ್ಳೆಗಳು ನನ್ನ ರಕ್ತ ಹೀರುತ್ತಿರಲಿಲ್ಲ. ನನ್ನ ಕವಿತೆಯ ಬಗ್ಗೆ ಹಿಂಟ್ ಸಿಕ್ಕಿ ನನ್ನ ಮೇಲೆ ಗೌರವ ಬಂದಿರಬಹುದೇ? ಸ್ವಲ್ಪ ಹೊತ್ತಿನಲ್ಲಿ ನನ್ನ ಎರಡೂ ಕಿವಿಗಳ ಬಳಿ ಸೊಳ್ಳೆಗಳು ರಾಗವಾಗಿ ಹಾಡತೊಡಗಿದವು. ಮೊದಲೆಲ್ಲಾ ಇರ್ರಿಟೇಟ್ ಆಗುತ್ತಿದ್ದ ಆ ಹಾಡುಗಳು ಇತ್ತೀಚೆಗೆ ಮಧುರ ಪ್ರೇಮಗೀತೆಯಂತೆ ಕೇಳಿಸುತ್ತಿತ್ತು. ಹಿಂದಿನ ದಿನವಷ್ಟೇ ಯೌವನಕ್ಕೆ ಕಾಲಿಟ್ಟ ಹೆಣ್ಣು ಸೊಳ್ಳೆಯೊಂದು "ಮಧುರ ಪಿಸುಮಾತಿಗೆ....." ಎಂದು ನನ್ನ ಕಿವಿಬಳಿ ಹಾಡುತ್ತಿತ್ತು. ಶ್ರೇಯಾ ಘೋಷಾಲ್, ಸೋನು ನಿಗಮ್ ರಂತಹ ಎಷ್ಟೊಂದು ಸೊಳ್ಳೆ ಪ್ರತಿಭೆಗಳು ಮನುಷ್ಯನ ಕ್ರೂರಿ ಕೈಗಳ ನಡುವೆ ಎಲಿಮಿನೇಟ್ ಅಗಿರಬಹುದು???? ಇವುಗಳಿಗೆಲ್ಲಾ ನ್ಯಾಯ ದೊರಕಿಸಿಕೊಡಬಹುದೆ? ನನ್ನ ಮುಂದಿನ ಹಾದಿ ಎಷ್ಟೊಂದು ಕಠಿನ ಎಂದು ಯೋಚಿಸುತ್ತಾ ನಿದ್ರೆಗೆ ಜಾರಿದೆ.
ಸಂಜೆ ಆಫೀಸ್ ನಿಂದ ಬಂದು ಕುಳಿತ್ತಲ್ಲೇ ಸ್ವಲ್ಪ ಮಂಪರು ಆವರಿಸಿತ್ತು, ಬಾಗಿಲು ಬಡಿಯುವ ಶಭ್ದಕ್ಕೆ ಎಚ್ಚರವಾಯಿತು. ಬಾಗಿಲು ತೆರೆದು ನೋಡಿದರೆ ಯಾರೋ ವ್ಯಕ್ತಿಯೊಬ್ಬ ನನ್ನ ಬಗ್ಗೆ ವಿಚಾರಿಸಿದ. ತಾನು ಹುಡುಕುತ್ತಿದ್ದ ವ್ಯಕ್ತಿ ನಾನೇ ಎಂದು ತಿಳಿದವನೇ ಜೇಬಿನಿಂದ ಒಂದು ಕವರ್ ತೆಗೆದು ನನ್ನ ಮುಖದ ಮೇಲೆ ಎಸೆದ. ತೆಗೆದು ನೋಡಿದರೆ, ನಿನ್ನೆ ನಾನೇ ಕಳಿಸಿದ್ದ ಕವನ.
"ಎನ್ರೀ ತಲೆ ಗಿಲೆ ಎನಾದ್ರೂ ಕೆಟ್ಟೀದಿಯಾ?"
ಬರುತ್ತಿರುವ ಕೋಪ ತಡೆಯುತ್ತಾ "ಯಾಕೆ ಎನಾಯ್ತು?" ಎಂದೆ.
" ಅಲ್ಲ ಮಾರಾಯ್ರೆ, ಮಾಡೋಕೆ ಬೇರೆ ಎನೂ ಕೆಲ್ಸ ಇಲ್ವಾ? ಹೋಗಿ ಹೋಗಿ ಸೊಳ್ಳೆ ಬಗ್ಗೆ ಕವಿತೆ ಬರೆದಿದ್ದೀರಲ್ವಾ. ನಿಮ್ಗೆ ಗೊತ್ತಾ ಮೊನ್ನೆ ಮಂಗಳೂರಿಗೆ ಅಜ್ಜಿ ಮನೆಗೆ ಹೋಗಿದ್ದ ನನ್ನ ಮಗಳಿಗೆ ಸೊಳ್ಳೆ ಕಚ್ಚಿ ಮಲೇರಿಯಾ ಬಂದಿದೆ. ಮಲೇರಿಯಾ ಬಗ್ಗೆ ಜನರಿಗೆ ಜಾಗ್ರತಿ ಮಾಡಬೇಕಾಗಿರೋ ಈ ಟೈಮಲ್ಲಿ, ಕವಿತೆ ಬರೆದಿದ್ದೀರಲ್ರೀ."
"ಇಲ್ಲಾ ಸಾರ್, ನಾನು ಸೊಳ್ಳೆ ಬಗ್ಗೆ ಜಾಗ್ರತಿ ಮಾಡ್ಲಿಕ್ಕೆ ಅಂತಲೇ ಕವಿತೆ ಬರೆದಿರೋದು" ಅಂತ ನನ್ನ ಯೋಚನೆ ಬಗ್ಗೆ ಅವ್ರಿಗೆ ವಿವರಿಸೋಣ ಅಂತ ಬಾಯಿ ತೆರೆದರೆ, ಆ ಆಸಾಮಿ ಮಾತಾಡಲು ಬಿಡಲೇ ಇಲ್ಲ.
" ಜಾಗ್ರತಿ ಮೂಡಿಸಲು ಮನಸ್ಸಿದ್ದರೆ ಮಲೇರಿಯಾ ಬಗ್ಗೆ ಲೇಖನ ಬರೆಯಿರಿ, ಅನಾಫಿಲಿಸ್ ಬಗ್ಗೆ ಬರೆಯಿರಿ. ಅದನ್ನ ಬಿಟ್ಟು ಕವಿತೆ ಕವನ ಅಂತ ಬರೆದ್ರೆ ಅಷ್ಟೆ!!!"
ಪಾಪ ಮಗಳಿಗೆ ಮಲೇರಿಯಾ ಬಂದಿರುವಾಗ ಆ ಸಂಪಾದಕರಿಗೆ ನನ್ನ ಕವಿತೆ ಸಿಟ್ಟು ಬರಿಸಿದ್ದರೆ ಅದರಲ್ಲಿ ತಪ್ಪಿಲ್ಲ. ಅಹಿಂಹಾ ವಾದಿಯಾದರಿಂದ ಎದುರು ಮಾತಾಡಲಾಗಲಿಲ್ಲ. ಪಕ್ಕದ ಮನೆ ಕಡೆ ಒಮ್ಮೆ ಇಣುಕಿ ನೋಡಿದೆ. ಯಾರೂ ನೋಡಿಲ್ಲ ನನ್ನ. ಬಾಗಿಲು ಹಾಕಿ ಸುಮ್ಮನೆ ಬಂದು ಒಳಗೆ ಕುಳಿತೆ.
ಸೂಳ್ಳೆಗಳ ರಕ್ಷಣೆಗೆ ನಿಂತ ನಾನು ಏಕಾಂಗಿ ಎಂಬ ಭಾವನೆ ಮನಸ್ಸಿಗೆ ಬಂತು. ಕೇವಲ ಅನಾಫಿಲಿಸ್ ಎಂಬ ಸೊಳ್ಳೆ ಯಿಂದಾಗಿ ಪೂರ್ತಿ ಸೊಳ್ಳೆಗಳ ಜನಾಂಗದ ಮೇಲೆ ಸೇಡು ಹೊತ್ತಿರುವ ಸಂಪಾದಕರ ಬಗ್ಗೆ ಮರುಕ ಹುಟ್ಟಿತು. ಮನಸ್ಸಿಗೆ ಘಾಸಿಯಾಗಿದ್ದರಿಂದಲೋ ಎನೋ, ಮೈ ಕೈ ಎಲ್ಲಾ ನೋವಾದಂತೆ, ಆಯಾಸವಾದಂತೆ ಭಾಸವಾಯಿತು. ನನ್ನ ಮುಂದಿನ ದಾರಿ ಬಗ್ಗೆ ಯೋಚಿಸಿ ಕುಳಿತ್ತಿದ್ದ ನನಗೆ ನಿದ್ದೆ ಬಂದಿದ್ದೇ ತಿಳಿಯಲಿಲ್ಲ.
ಸುತ್ತಲೂ ಕತ್ತಲು, ಎನೂ ಕಾಣಿಸುತ್ತಿರಲಿಲ್ಲ. ಗುಹೆ ಇರಬಹುದೇನೋ. ದೂರದಲ್ಲಿ ಎಲ್ಲೋ ರಾಷ್ಟ್ರಗೀತೆಯಂತಹ ಗೀತೆ ಕೇಳಿಸುತ್ತಿತ್ತು. ಹತ್ತಿರ ಹೋದೆ. ಕಣ್ಣ ಮುಂದಿನ ದೃಶ್ಯ ನೋಡಿ ದಂಗಾದೆ. ಕಣ್ಣ ಮುಂದೆ ಲಕ್ಷಗಟ್ಟಲೆ ಸೊಳ್ಳೆಗಳು ಶಿಸ್ತಿನ ಸಿಪಾಯಿಗಳ ತರ ಕೂತಿದ್ದವು. ಆಗಷ್ಟೆ ಕೇಳಿಸುತ್ತಿದ್ದ ರಾಷ್ಟ್ರಗೀತೆಯಂತ ಹಾಡುಗಳು ಎಲ್ಲಿಂದ ಬರ್ತಾ ಇತ್ತು ಎಂದು ನನಗೆ ಈಗ ಅರ್ಥವಾಯಿತು. ಮುಂದೆ ಸಾಗುತ್ತಿದ್ದಂತೆ ಒಂದು ಸಿಂಹಾಸನದ ಮೇಲೆ ಕಿರೀಟ ಧರಿಸಿದ್ದ ಒಂದು ದೊಡ್ಡ ಸೊಳ್ಳೆ ಕೂತಿತ್ತು. ಅದು ಸೊಳ್ಳೆಗಳ ರಾಜ ಇರಬಹುದು ಎಂದು ಊಹಿಸಿದೆ.
ಸೊಳ್ಳೆಗಳ ರಾಷ್ಟಗೀತೆ ಮುಗಿಯಿತು. ರಾಜ ಎದ್ದುನಿಂತು, " ಇಂದು ಅಹಾರದ ಬೇಟೆಯಲ್ಲಿ ಮಡಿದ ನಮ್ಮ ಅಮಾಯಕ ಮಿತ್ರರಿಗೆ ಶ್ರದ್ದಾಂಜಲಿ ಅರ್ಪಿಸಲು ಎಂದಿನಂತೆ ೧ ನಿಮಿಷ ಮೌನ ಆಚರಿಸೋಣ" ಎಂದ.
ಎಲ್ಲಾ ಸೊಳ್ಳೆಗಳೂ ಮೌನವಾಗಿ ನಿಂತು ಕಣ್ಣೀರು ಮಿಡಿಯುತ್ತಿದ್ದವು. ಅಲ್ಲೊಮ್ಮೆ ಇಲ್ಲೊಮ್ಮೆ ಬಿಕ್ಕಳಿಸಿ ಅಳುವ ದನಿ ಕೇಳಿಸುತಿತ್ತು. ಇಂದು ಮಡಿದವರು ಇಲ್ಲಿರುವ ಕೆಲವು ಸೊಳ್ಳೆಗಳ ಮಗನೋ, ಮಗಳೋ ಅಥವಾ ಬೇರೆ ಯಾವತರ ಸಂಭದಿಕರೋ ಅಗಿರ್ಬೇಕು. ಅದಕ್ಕೆ ಅಳುತ್ತಿವೆ. ಮನುಷ್ಯನ ಕ್ರೌರ್ಯಕ್ಕೆ ನನಗೂ ದುಃಖ ಉಮ್ಮಳಿಸಿ ಬಂತು.
ನನ್ನ ಅಳುವಿನ ಶಬ್ಧ ಕೇಳಿದ ರಾಜ, ನನ್ನ ನೋಡುತ್ತಿದ್ದಂತೆ ಎದ್ದು ನಿಂತ. ಉಳಿದೆ ಸೈನಿಕರೂ ರ‍ಾಜನನ್ನು ಅನುಸರಿಸಿದವು.
"ಬರಬೇಕು, ನಮ್ಮ ಸಾಮ್ರಾಜ್ಯಕ್ಕೆ ಸುಸ್ವಾಗತ. ನೀವು ನಮ್ಮ ಸಮಾಜದ ಬಗ್ಗೆ ಇಟ್ಟಿರುವ ಪ್ರೀತಿಗೆ ಧನ್ಯವಾದಗಳು. ನಿಮ್ಮನ್ನು ಅಭಿನಂದಿಸಲು ಇಲ್ಲಿ ಅಹ್ವಾನಿಸಿದ್ದೇನೆ"
ಸೊಳ್ಳೆಗಳೆಲ್ಲಾ ಗೌರವದಿಂದ ನನ್ನನ್ನು ನೋಡುತ್ತಿದ್ದವು. ನನಗೆ ಅನಾಫಿಲಿಸ್ ಸೊಳ್ಳೆಯ ಬಗ್ಗೆ ರಾಜನಲ್ಲಿ ಕೇಳುವ ಆತುರ ತಡೆಯಲಾಗಲಿಲ್ಲ.
"ರಾಜ, ನಿಮ್ಮಲ್ಲಿರುವ ಅನಾಫಿಲಿಸ್ ಎಂಬ ಸೊಳ್ಳೆಗಳಿಂದ ಸೊಳ್ಳೆಗಳ ಸಂತಾನಕ್ಕೆ ಅಪವಾದ ಅಂಟಿಕೊಂಡಿದೆ. ಅವುಗಳಿಂದಾಗಿ ಸೊಳ್ಳೆಗಳೆಂದರೆ ಜನರು ಭಯಪಡುತ್ತಾರೆ. ಅವುಗಳನ್ನು ನಾಶಪಡಿಸಿದರೆ ಸೊಳ್ಳೆಗಳ ಬಗ್ಗೆ ಜನರಲ್ಲಿರುವ ಆತಂಕ ಕಡಿಮೆಯಾಗುತ್ತದೆ. "
ಅನಾಫಿಲಿಸ್ ಎಂಬ ಹೆಸರು ಕೇಳುತ್ತಲೇ ರಾಜನ ಮುಖ ವಿವರ್ಣವಾಯಿತು.
"ಅನಾಫಿಲಿಸ್ ಸೊಳ್ಳೆ ಯ ಜಾತಿಗೆ ಸೇರಿದ ಕೀಟ ಅಲ್ಲ. ನಮಗೂ ಅವಕ್ಕೂ ಸಂಬಂಧವೇ ಇಲ್ಲ" ಎಂದು ರಾಜ ಬಡಬಡಿಸುವಾಗ, ರಕ್ತ ಕುಡಿದು ಕೆಂಪಾಗಿರುವ ಸೊಳ್ಳೆಗಳ ಗುಂಪೊಂದು ವಿಜಯೋತ್ಸವ ಆಚರಿಸುತ್ತಾ ಬಂದವು.
ಅವೇ ಅನಾಫಿಲಿಸ್ ಸೊಳ್ಳೆಗಳು. ರಾಜ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡದಕ್ಕೆ ಪೇಚಿಗೊಳಗಾದ. ನನಗೆ, ಉಗ್ರಗಾಮಿಗಳಿಗೂ ನಮಗೂ ಸಂಭಂದ ಇಲ್ಲ ಎನ್ನುವ ಪಾಕಿಸ್ತಾನಿಯರ ನೆನಪಾಯಿತು. ಅನಾಫಿಲಿಸ್ ಸೊಳ್ಳೆಗಳನ್ನು ಈ ಸೊಳ್ಳೆಗಳ ರಾಜ ಸಾಕುತ್ತಿದ್ದಾನೆ.
ಇನ್ನು ಈ ಸೊಳ್ಳೆಗಳನ್ನು ರಕ್ಷಿಸಲು ನಾನು ಹೋರಾಡಿದರೆ ತಪ್ಪಾದೀತು. ಕೂಡಲೇ ರಾಜನ ಬಳಿ ಸೊಳ್ಳೆಗಳ ಮೇಲೆ ಯುದ್ಧ ಸಾರುವ ನಿರ್ಧಾರ ತಿಳಿಸಿದೆ.
ಅಷ್ಟರಲ್ಲಿ ಅನಾಫಿಲಿಸ್ ಹಾಗೂ ಇನ್ನಿತರ ಸೊಳ್ಳೆಗಳು ನನ್ನನ್ನು ಸುತ್ತುವರಿದವು...
ಕನಸಿನ ಲೋಕದಿಂದ ಎಚ್ಚರವಾದಾಗ ಆಸ್ಪತ್ರೆಯ ಬೆಡ್ ನ ಮೇಲೆ ಇದ್ದೆ. ಪಕ್ಕದಲ್ಲೆ ಪಕ್ಕದ ಮನೆಯವರು ನಿಂತಿದ್ದರು.
"ಏನ್ರೀ ನಿದ್ದೆಯಲ್ಲಿ ಎಲ್ಲಾ "ಅನಾಫಿಲಿಸ್ ಅನಾಫಿಲಿಸ್ " ಎಂದು ಬೊಬ್ಬೆ ಹೊಡೆಯುತ್ತಿದ್ದಿರಿ" ಎಂದು ನಕ್ಕರು,
"ನಿನ್ನೆ ರಾತ್ರಿ ನೋಡಿದ್ರೆ ಪೇಪರ್ ಓದೋಣ ಎಂದು ನಿಮ್ ಮನೆಗೆ ಬಂದರೆ, ಜ್ವರ ಬಂದು ಮೈಯೆಲ್ಲಾ ಸುಡುತ್ತಿತ್ತು. ಜ್ನಾನ ತಪ್ಪಿ ಮನೇಲಿ ಬಿದ್ದಿದ್ರಿ. ಅದ್ಕೆ ಆಸ್ಪತ್ರೆಗೆ ತಂದು ಸೇರಿಸಿದೆ. ಡಾಕ್ಟರ್ ಮಲೇರಿಯಾ ಅಂದಿದ್ದಾರೆ, ಸ್ವಲ್ಪ ದಿನ ಇಲ್ಲೇ ಇರ್ಬೇಕಾಗುತ್ತದೆ" ಎಂದು ತಾನು ಓ.ಸಿ ಪೇಪರ್ ಓದಲು ಬಂದಿದ್ದರಿಂದ ನನ್ನ ಪ್ರಾಣ ಉಳೀತು ಅನ್ನೋ ತರ ಪೋಸ್ ಕೊಡ್ತಾ ಇದ್ದ.
ಒಂದು ವಾರ ಆಸ್ಪತ್ರೆಯಲ್ಲಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಬರುವಾಗ ಅಂಗಡಿಯಿಂದ ಒಳ್ಲೆ ಸ್ಟ್ರಾಂಗ್ ಸೊಳ್ಳೆ ಬತ್ತಿ ಕೊಂಡ್ಕೊಂಡು ಬಂದೆ. ಮನೆಗೆ ಬಂದವನೇ ಪೇಪರ್ ಪೆನ್ನು ತಗೊಂಡು ನನ್ನ ಮುಂದಿನ ಲೇಖನಕ್ಕೆ ಶೀರ್ಷಿಕೆ ಬರೆದೆ,
"ಸೊಳ್ಳೆಗಳ ಸಂಹಾರ ಹೇಗೆ?"

___________________________________________________

Previous Post Next Post