ಯೋಗರಾಜ್ ಭಟ್ರು ಈ ಸಲ ಮಳೆ ಬೆಟ್ಟ ಹಸಿರು ಕಣಿವೆಗಳನ್ನು ಅಪ್ಪಿ ತಪ್ಪಿಯೂ ತೋರಿಸುವುದಲ್ಲ. ಮೊಲ, ಹಂದಿ ಯಾವ ಪ್ರಾಣಿಯ ಗೋಜಿಗೂ ಹೋಗುವುದಿಲ್ಲ. ಆದರೂ ಪ್ರೇಕ್ಷಕರಿಗೆ ಅಲ್ಲಲ್ಲಿ ಮಳೆಯಲ್ಲಿ ನೆನೆಯುತ್ತಾ ಗಾಳಿಪಟ ಹಾರಿಸಿದ ಅನುಭವವಾದರೆಆದು ಭಟ್ರ ತಪ್ಪೋ ಪ್ರೇಕ್ಷಕರ ಭ್ರಮೆಯೋ ಗೊತ್ತಿಲ್ಲ!
ಮನಸಾರೆ ಚಿತ್ರದ ಕಥೆ ಕೂಡ ಭಟ್ಟರ ಹಿಂದಿನೆರಡು ಚಿತ್ರಗಳಂತೆ ತೆಳುವಾದ ಕಥೆ. ಇಲ್ಲಿಯೂ ಒಬ್ಬ ಪಟ ಪಟನೆ ಮಾತಾಡುವ ಬೇಜವಾಬ್ದಾರಿಯ ಹುಡುಗ ಇದ್ದಾನೆ. ಆ ಹುಡುಗನನ್ನು ಅಚಾತುರ್ಯದಿಂದ ಹುಚ್ಚಾಸ್ಪತ್ರೆಯ ಸಿಬ್ಬಂದಿಗಳು ಹುಚ್ಚ ಎಂದು ಭಾವಿಸಿ ಹುಚ್ಚಾಸ್ಪತ್ರೆಗೆ ಸೇರಿಸಿಬಿಡುತ್ತಾರೆ. ಹುಚ್ಚರ ನಡುವೆ ನಿಂತು ತಾನು ಹುಚ್ಚ ಅಲ್ಲ ಅಂದರೆ ಯಾರಾದರೂ ಕೇಳುತ್ತಾರೆಯೇ? ಇತರ ಹುಚ್ಚರ ಜೊತೆಗೆ ಇವನನ್ನೂ ಕೂಡಿಹಾಕುತ್ತಾರೆ. ಚಿತ್ರದ ಹಾಸ್ಯದ ಪ್ರಧಾನ ವಾಹಿನಿಯೇ ಈ ಹುಚ್ಚರಾಡುವ ಹುಚ್ಚಾಟಗಳು ಮತ್ತವರ ಮಾತುಗಳು! ಒಬ್ಬ ಚಿತ್ರದುದ್ದಕ್ಕೂ ಬಟ್ಟೆ ಇಲ್ಲ ಬಟ್ಟೆ ಇಲ್ಲ ಎಂದು ಒಬ್ಬ ನಗಿಸಿದರೆ ಗಂಡು ಮೆಟ್ಟಿದ ನೆಲ ಹುಬ್ಳಿ ಕನ್ನಡದಲ್ಲಿ ಇನ್ನೊಬ್ಬ ಕಚಗುಳಿಯಿಡುತ್ತಾನೆ. ಈ ಹುಚ್ಚರ ನಡುವೆ ನಾಯಕನೂ ಹುಚ್ಚನಲ್ಲದಿದ್ದರೂ ಹುಚ್ಚನಾಗಿಯೇ ಇರಬೇಕಾಗುತ್ತದೆ! ಇಂತಿಪ್ಪ ನಮ್ಮ ಹುಚ್ಚಪ್ಪ ನಾಯಕ ಒಮ್ಮೆ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಸಂದರ್ಭದಲ್ಲಿ ಲೇಡಿ ಹುಚ್ಚಿಯೊಬ್ಬಳನ್ನು ನೋಡುತ್ತಾನೆ. ಅವಳ ಕೂದಲನ್ನು ನೋಡಿಯೇ ಅವನ ಲೈಫ್ ಲೈಟಾಗಿ ಹಾಳಾಗಿಹೋಗುತ್ತದೆ! ಓಡಿಹೋಗುವ ನಿರ್ಧಾರವನ್ನು ಅಲ್ಲಿಗೇ ಕೈಬಿಟ್ಟು ಬಿಡುತ್ತಾನೆ! ಹುಚ್ಚು ಹುಡುಗಿಯನ್ನು ಮೆಚ್ಚಿಸುವ ಕೆಲಸಕ್ಕೆ ಕೈ ಹಾಕುತ್ತಾನೆ! ಮುಂದೆ ಏನಾಗುತ್ತದೆ ಎಂಬುದನ್ನು ನೀವೇ ನೋಡಿ ತಿಳಿದುಕೊಳ್ಳಿ…
ಮುಂಗಾರು ಮಳೆ, ಗಾಳಿಪಟದ ಕುರುಹೂ ಇರಬಾರದು ಎಂದು ಭಟ್ಟರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅಲ್ಲಲ್ಲಿ ಸಂಭಾಷಣೆಗಳು ಅವರ ಹಳೆಯ ಚಿತ್ರಗಳನ್ನು ನೆನಪಿಸುತ್ತವೆ.. ಲೈಫ್ ಹಾಳಾಗೋಯ್ತು ಅನ್ನೋದು, ಗಂಡು ಜನ್ಮ ಸಾಕಾಯ್ತು ಅನ್ನೋದು ಬೇಡ ಬೇಡ ಅಂದ್ರೂ ಮಳೆ/ಪಟಗಳನ್ನು ನೆನಪಿಸುತ್ತವೆ. ಆದರೆ ಹಾಸ್ಯ ಸನ್ನಿವೇಶಗಳಲ್ಲಿ ಭಟ್ಟರು ಹೊಸತನವನ್ನು ಮೆರೆದಿದ್ದಾರೆ. ಮೊದಲಾರ್ಧ ಪೂರ್ತಿ ನಗಿಸುತ್ತಲೇ ಮುಗಿಯುತ್ತದೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಮಂಕು! ಕ್ಲೈಮ್ಯಾಕ್ಸ್ ಅಂತೂ ತೀರಾ ನೀರಸ! ಒಟ್ಟಾರೆ ಭಟ್ಟರು ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದಾರೆಂಬುದು ಸರಿಯಾಗಿ ತಿಳಿಯುವುದಿಲ್ಲ. ದ್ವಿತೀಯಾರ್ಧದ ನಿರೂಪಣೆಯಲ್ಲಿ ಭಟ್ಟರು ಸ್ವಲ್ಪ ಎಡವಿದಂತೆ ಕಾಣುತ್ತದೆ. ಆಚೆಗೆ ಹಾಸ್ಯವೂ ಅಲ್ಲ, ಭಾವನಾತ್ಮಕವೂ ಪೂರ್ತಿ ಅಲ್ಲದ ಕಲಸು ಮೇಳೊಗರವಾಗಿಬಿಟ್ಟಿದೆ ದ್ವಿತೀಯಾರ್ಧ!ಏಕೆ ಹೀಗಾಯ್ತು ಭಟ್ಟರೇ?
ದಿಗಂತ್ ಹಿಂದಿಗಿಂತ ಮಾಗಿದ್ದಾರೆ.. ಅಲ್ಲಲ್ಲಿ ಮುಂಗಾರು ಮಳೆಯ ಗಣೇಶನಂತೆ ಸಂಭಾಷಣೆಯನ್ನು ಒಪ್ಪಿಸಿದರೂ ಪೂರ್ತಿ ನಕಲು ಹೊಡೆದಿಲ್ಲ! ಆಂದ್ರಿತಾ ಪಾತ್ರ ಮಾತಾಡುವುದೇ ಇಂಟರ್‍ವಲ್ ಆದ ಮೇಲೆ. ಆದರೂ ಈ ಹುಡುಗಿ ಮುದ್ದಾಗಿ ಕಾಣುವಷ್ಟೇ ಮುದ್ದಾಗಿ ಅಭಿನಯವನ್ನೂ ಮಾಡುತ್ತಾಳೆ. ಚಿತ್ರದಲ್ಲಿ ಇನ್ನಿಬ್ಬರು ಹೀರೋಹಳಿದ್ದಾರೆ. ಸತ್ಯ ಹೆಗಡೆ ಮತ್ತು ಮನೋಮೂರ್ತಿ! ಅದ್ಭುತವಾದ ಛಾಯಾಗ್ರಹಣ ಮತ್ತು ಹಾಡುಗಳು ಚಿತ್ರದ ಇನ್ನೆರಡು ಪ್ಲಸ್ ಪಾಯಿಂಟ್‍ಗಳು.
ಆದರೂ ಚಿತ್ರ ನೋಡಿ ಹೊರಬರುವಾಗ ಏನೋ ಕೊರತೆಯಿದೆ ಅನ್ನಿಸುವುದು ಮಾತ್ರ ಸತ್ಯ!


