Pancharangi Review in Kannada

ಚಿತ್ರವಿಮರ್ಶೆ: ಪಂಚರಂಗಿ ಒಂದು ಅಪರೂಪದ ಚಿತ್ರ
* ರಾಜೇಂದ್ರ ಚಿಂತಾಮಣಿ
ಒಮ್ಮೆ ಚಿತ್ರ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುತ್ತದೆ. ಪಾತ್ರಗಳು ಕಾಡುತ್ತವೆ. ಹಾಡುಗಳು ಗುನುಗುನಿಸುತ್ತವೆ. ಎಲ್ಲೂ ಬೋರು ಹೊಡೆಸುವುದಿಲ್ಲ. ಶೇ.100ರಷ್ಟು ಪರಿಶುದ್ಧ ಮನರಂಜನಾತ್ಮಕ ಚಿತ್ರ. ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಸೆಡ್ಡುಹೊಡೆಯುತ್ತದೆ. ಮಚ್ಚು, ಲಾಂಗು, ಮಳೆ, ಐಟಂ ಸಾಂಗು, ಮಸಾಲೆ ವಗೈರೆ ನಿರೀಕ್ಷಿಸಿ ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ!

ಪ್ರೇಕ್ಷಕರ ನಿರೀಕ್ಷೆಗಳು ಹುಸಿಯಾಗಿಲ್ಲ. ಯೋಗರಾಜ್ ಭಟ್ಟರು ನಂಬಿಕೆ ಉಳಿಸಿಕೊಂಡಿದ್ದಾರೆ. ಅವರ ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ. ಕನ್ನಡ ಪ್ರೇಕ್ಷಕರು ಈ ರೀತಿಯ ಚಿತ್ರವನ್ನು ನೋಡಿ ಬಹು ಕಾಲವಾಗಿತ್ತು. ಇಷ್ಟು ದಿನ ಕಾದಿದಕ್ಕೂ ಸಾರ್ಥಕವಾಯ್ತು. ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಾಯಿಸುವಂತಹ ಚಿತ್ರವನ್ನು ಭಟ್ಟರು ಕೊಟ್ಟಿದ್ದಾರೆ. ಏಕತಾನತೆಯ ಗುಂಗಿನಿಂದ ಪಂಚರಂಗಿ ಹೊರಬಂದಿದೆ. ಹಾಗಂತ ಚಿತ್ರ ನೋಡಿದ ಮೇಲೆ ಅನ್ನಿಸದೆ ಇರದು.
ಚಿತ್ರದಲ್ಲಿ ಸಸ್ಪೆನ್ಸ್, ಫೈಟ್ಸ್, ಹೊಸ ಹೊಸ ತಿರುವುಗಳು, ಖಳ ನಟ, ಕ್ಲೈಮ್ಯಾಕ್ಸ್ ಏನು ಇಲ್ಲದೆಯೇ ಚಿತ್ರವನ್ನು ಲೀಲಾಜಾಲವಾಗಿ ಭಟ್ಟರು ತೆರೆಗೆ ತಂದಿದ್ದಾರೆ. ಸಿದ್ಧಸೂತ್ರಗಳಿಲ್ಲದೆಯೇ ಚಿತ್ರವನ್ನು ತೆಗೆಯಬಹುದು ಎಂಬುದನ್ನು ನಿರೂಪಿಸಿದ್ದಾರೆ. ಮುಂಗಾರು ಮಳೆಯಲ್ಲಿ ಜೋಗ ಅಂದವನ್ನು ಮತ್ತೊಂದು ಕೋನದಿಂದ ತೋರಿಸಿದ್ದ ಭಟ್ಟರು ಇಲ್ಲಿ ಲೈಫು ಇಷ್ಟೇನೆ ಎಂದು ಜೀವನದ ಮತ್ತೊಂದು ಮಗ್ಗುಲನ್ನು ಅನಾವರಣಗೊಳಿಸಿದ್ದಾರೆ.

ಗಾಂಧಿನಗರದ ಸಿದ್ಧಸೂತ್ರಗಳಿಗೆ ಈ ಚಿತ್ರ ಜಾಡಿಸಿ ಒದೆಯುತ್ತದೆ. ಮನೆ, ಪ್ರಶಾಂತ ಸಮುದ್ರ, ತೆಂಗಿನ ಮರಗಳು...ನಿರ್ಜೀವ ವಸ್ತುಗಳು ಇಲ್ಲಿ ಜೀವ ಪಡೆದುಕೊಳ್ಳುತ್ತವೆ. ಚಿತ್ರದಲ್ಲಿ ಮುಖ್ಯವಾಗಿ ಕಾಡುವುದು ಸಂಭಾಷಣೆ. ಮೊದಲರ್ಧ ಮುಗಿಯುವುದರೊಳಗೆ ಸಮಯ ಸರಿದದ್ದೆ ಗೊತ್ತಾಗದಷ್ಟು ಸಲೀಸಾಗಿ ಸಾಗುತ್ತದೆ. ಸಂಭಾಷಣೆ ಸುಲಿದ ಬಾಳೆಹಣ್ಣಿನಂತಿದೆ. ಸಂಭಾಷಣೆಯ ಸರಮಾಲೆ ಪೋಣಿಸುವಲ್ಲಿ ಭಟ್ಟರ ಲೀಲೆ ಅದ್ಭುತ.

ಚಿತ್ರದಲ್ಲಿ ಕಣ್ಣಿಗೆ ಹಿತ ಎನಿಸುವ ಛಾಯಾಗ್ರಹಣವಿದೆ. ಹೃದಯಕ್ಕೆ ಆಪ್ತವಾಗುವ ಸಂಭಾಷಣೆ ಇದೆ. ಜೊತೆಗೆ ಇಂಪಾದ ಸಂಗೀತ, ಸಾಹಿತ್ಯದ ಸಮಾಗಮ. ಅಲ್ಲಲ್ಲಿ ನುಸುಳುವ ಪೋಲಿ ಜೋಕುಗಳಿಗೂ ಬರವಿಲ್ಲ. ತೆರೆಯ ಮುಂದಿನ ಪಾತ್ರಗಳು ಹೇಗೆ ಕಾಡುತ್ತವೋ ಅದಕ್ಕಿಂತಲೂ ಮಿಗಿಲಾಗಿ ತೆರೆಯ ಹಿಂದಿನ ತಂತ್ರಜ್ಞರ ಕೆಲಸ ಪ್ರತಿ ಫ್ರೇಂನಲ್ಲೂ ಕಣ್ಣಿಗೆ ರಾಚುತ್ತದೆ. ಈ ಚಿತ್ರವನ್ನು ತೆರೆಗೆ ತರಲು ಭಟ್ಟರು ಯಾಕೆ ಇಷ್ಟು ಸಮಯ ತೆಗೆದುಕೊಂಡರು ಎಂಬುದು ಚಿತ್ರ ನೋಡಿದ ಬಳಿಕ ಅರ್ಥವಾಗುತ್ತದೆ.

ಪಾತ್ರವರ್ಗ: ಕನ್ನಡದ ಮುದ್ದಿನ ಕುವರನಾಗಿ ದಿಗಂತ್ ಇಷ್ಟವಾಗುತ್ತಾರೆ. ಶಾಲಿವಾಹನ ಶಕೆ ಮನೆಗಳು, ಹೂವು ಮುಡಿದ ಚೌಲ್ಟ್ರಿಗಳು, ಹೆರಿಗೆ ವಾರ್ಡುಗಳು, ಸಾಂಬ್ರಾಣಿಗಳು, ರಿಬ್ಬನ್ನುಗಳು, ಮುದ್ದು ಜಡೆಗಳು, ಒದ್ದೆ ಕೊಡೆಗಳು.... ಹೀಗೆ ಎಲ್ಲದಕ್ಕೂ ಗಳು ಗಳು ಎಂದು ಬೆರೆಸಿ ಮಾತನಾಡುವ ಶೈಲಿ ಚೆನ್ನಾಗಿದೆ. ಗೊಂಬೆಗೆ ಸೀರೆ ಉಡಿಸುವ ಆತ ಒಮ್ಮೆ ನಾಯಕಿಗೂ ಸೀರೆ ಉಡಿಸುವ ಸನ್ನಿವೇಶ ಬರುತ್ತದೆ. ಸೀರೆ ಉಡಿಸುವ ಆತನ ಕೈಚಳಕಕ್ಕೆ ಹೆಂಗೆಳೆಯರು ಮನಸೋಲಲೇ ಬೇಕು, ಬೆರಗಾಗಲೆ ಬೇಕು. ನಿರ್ಲಿಪ್ತ, ನಿರಾಭಾವ, ಸೋಂಬೇರಿ ಎಂದು ಅಶರೀರವಾಣಿ (ಭಟ್ಟರು) ಪರಿಚಯಿಸಿದರೂ ಅದಕ್ಕೆ ಅಪವಾದ ಎಂಬಂತೆ ದಿಗಂತ್ ನಟನೆಯಲ್ಲಿ ಲವಲವಿಕೆಯಿದೆ.

ಚೆಲ್ಲು ಚೆಲ್ಲು ಹುಡುಗಿಯಾಗಿ ನಿಧಿ ಸುಬ್ಬಯ್ಯ ನೇರವಾಗಿ ಹೃದಯಕ್ಕೆ ಲಗ್ಗೆ ಹಾಕುತ್ತಾರೆ. ಲಯಬದ್ಧವಾಗಿ ತೇಲಿ ಬರುವ ಸಮುದ್ರದ ಅಲೆಗಳಂತೆ ಒಮ್ಮೆ. ಸಮುದ್ರದ ಅಲೆಗಳ ಏರಿಳಿತ ಬಿರುಸಾದಂತೆ ಒಮ್ಮೆ ಕಾಡುತ್ತಾರೆ. ನಿಧಿ ಸುಬ್ಬಯ್ಯ ನಟನೆಯಲ್ಲೂ ಏರಿಳಿತಗಿಳಿವೆ. ಪ್ಯಾಟೆ ಹುಡುಗಿಯ ಪೊಗರು, ಹಳ್ಳಿ ಹುಡುಗಿಯ ಬೆಡಗನ್ನು ಕಾಣಬಹುದು. ಮಾದಕ ಚೆಲುವಿನ 'ನಿಧಿ'ಯನ್ನು ಭಟ್ಟರು ತೋರಿಸಿದ್ದಾರೆ.

ಮದುವೆ ಬ್ರೋಕರ್ ಪಾತ್ರದಲ್ಲಿ ರಾಜು ತಾಳಿಕೋಟೆ ಎಂದಿನಂತೆ ನಟಿಸಿದ್ದಾರೆ. ಮೇಷ್ಟ್ರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಯಂತ್ ಕಾಯ್ಕಿಣಿ ಮುಂದೆ ಪೋಷಕ ಪಾತ್ರಗಳಲ್ಲಿ ನಟಿಸುವ ಸೂಚನೆಯನ್ನು ಕೊಟ್ಟಿದ್ದಾರೆ. ಪದ್ಮಜಾರಾವ್, ಸುಂದರ್‌ರಾಜ್, ಸುಧಾಬೆಳವಾಡಿ, ನಾಗೇಂದ್ರ ಶಾ, ಸತೀಶ್, ಸೌಮ್ಯ, ನಾಗರಾಜ್ ಅರಸು, ನಿಧಿಯ ಸಹೋದರಿಯಾಗಿ ರಮ್ಯಾ ಬಾರ್ನೆ ನಟನೆ ಗಮನಾರ್ಹ. ಕುರುಡನ ಪಾತ್ರದಲ್ಲಿ ಪವನ್ ಕುಮಾರ್ ಅಭಿನಯ ನಕ್ಕು ನಲಿಸುತ್ತದೆ. ಸೀಮಿತ ಚೌಕಟ್ಟಿನಲ್ಲಿ ಅನಂತನಾಗ್ ಅಭಿನಯ ಅಭಿನಂದನಾರ್ಹ.

ಚಿತ್ರದ ಹೈಲೈಟ್: ಛಾಯಾಗ್ರಹಣ, ಸಂಭಾಷಣೆ, ಸಂಗೀತ, ಸಾಹಿತ್ಯ ಹಾಗೂ ಚಿತ್ರೀಕರಣ ಆಯ್ಕೆ ಮಾಡಿಕೊಂಡಿರುವ ಸ್ಥಳ. ಸಮುದ್ರ ಕಿನಾರೆ, ತೀರದಲ್ಲೆ ಇರುವ ಮನೆ, ಸಮುದ್ರದ ಕಡೆಗೆ ಬಾಗಿರುವ ತೆಂಗಿನ ಮರಗಳು ಚಿತ್ರದಲ್ಲಿ ಪಾತ್ರಗಳಂತೆ ಗೋಚರಿಸುತ್ತವೆ. ಸಂಭಾಷಣೆಯೇ ಇಲ್ಲಿ ಹೀರೋ, ಹೀರೋಯಿನ್. ನವಿರಾದ ಹಾಸ್ಯವೆ ಚಿತ್ರದ ಜೀವಾಳ.

ತಂತ್ರಜ್ಞರು: ವಿ ತ್ಯಾಗರಾಜನ್ ಅವರ ಛಾಯಾಗ್ರಹಣ ಕಣ್ಣಿಗೆ ಹಿತ ಮನಸಿಗೆ ಹತ್ತಿರ. ಕ್ಯಾನ್ವಾಸ್ ಮೇಲಿನ ಚಿತ್ರದಂತೆ ಮೂಡಿಬಂದಿದೆ. ಜೋನಿ ಹರ್ಷ ಸಂಕಲನವಂತೂ ಬೊಟ್ಟು ಮಾಡಿ ತೋರಿಸುವಂತಿಲ್ಲ. ಮನೋಮೂರ್ತಿ ಅವರ ಸಂಗೀತ ಉಡಿಸುವೆ ಬೆಳಕಿನ ಸೀರೆಯ, ಅರೆರೆ ಪಂಚರಂಗಿ, ಹುಡುಗರು ಬೇಕು... ಹಾಡುಗಳಲ್ಲಿ ಹೊಸದಾಗಿ ಮಿಡಿದಿದೆ. ಶಶಿಧರ ಅಡಪ ಕಲಾನಿರ್ದೇಶನ ಸೊಗಸಾಗಿದೆ.

ಸಾಹಿತ್ಯ, ಸಂಗೀತ: ಹಾಡುಗಳಲ್ಲಿ ಜೀವಂತಿಕೆಯಿದೆ. ಜೀವನದ ಕಟು ಸತ್ಯ, ಹಸಿ ವಾಸ್ತವಗಳು ಬಿಚ್ಚಿಕೊಳ್ಳುತ್ತವೆ. ಉಡಿಸುವೆ ಬೆಳಕಿನ ಸೀರೆಯ ಹಾಡಂತು ಚಿತ್ರದ ಹೈಲೈಟ್. ಈ ಹಾಡಿನ ಚಿತ್ರೀಕರಣ ಅದ್ಭುತವಾಗಿ ಮೂಡಿಬಂದಿದೆ. ಯೋಗರಾಜ್ ಭಟ್ ಬರೆದಿರುವ ಲೈಫು ಇಷ್ಟೇನೆ ಹಾಡು ಇಷ್ಟವಾಗುತ್ತದೆ. ಅರೆರೆರೇ ಪಂಚರಂಗಿ ಎಂಬ ಹಾಡು ಭಾವನಾತ್ಮಕ ಸನ್ನಿವೇಶಗಳಲ್ಲಿ ಬಳಕೆಯಾಗಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಹುಡುಗರು ಬೇಕು ಎಂಬ ಹಾಡುಗಳು ಚೆನ್ನಾಗಿದೆ.

ಚಿತ್ರ ವಿಮರ್ಶೆಗಳು ಬೋರು ಹೊಡೆಸಬಹುದೇನೋ! ಆದರೆ ಚಿತ್ರ ಎಲ್ಲೂ ಬೋರು ಹೊಡೆಸುವುದಿಲ್ಲ. ಬಹಳ ದಿನಗಳ ನಂತರ ಒಂದು ಒಳ್ಳೆ ಸಿನೆಮಾ ಬಂದಿದೆ. ಮನೆಮಂದಿಯಲ್ಲಾ ಹೋಗಿ ನೋಡಿ. ಕಚಗುಳಿ ಇಡುವ ಸಂಭಾಷಣೆ, ಹೃದಯ ಮೀಟುವ ಹಾಡು ಕೇಳಿ ಆನಂದಿಸಿ. ಈ ಪಿಕ್ಚರ್ ನಿಮ್ದೇ, ನಮ್ದೇನಿಲ್ಲ...ಲೈಫು ಇಷ್ಟೇನೆ...!!!http://photos.desitara.com/filesv3/events/7ef00d1dd0bfc61909934b326040d118I.jpg

Enter your email address here and get mp3 in your email:

Get Photos Mp3 Wallpaper directly to your email Id, Enter your email ID here

Previous Post Next Post